ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನಗೊಂಡ ಜೆಡಿಎಸ್- ಕಾಂಗ್ರೆಸ್ನ ಶಾಸಕರು ಸ್ಪೀಕರ್ ಕಚೇರಿಗೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸ್ವೀಕರಿಸುವಲ್ಲಿ ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಮಾಡುತ್ತಿರುವುದರನ್ನು ಪ್ರಶ್ನಿಸಿ 15 ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ನಿನ್ನೆ ಆ ಅರ್ಜಿಯ ಮಹತ್ವದ ವಿಚಾರಣೆ ನಡೆಸಿದ್ದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು.
ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು ಹೊರಬೀಳಲಿದೆ. ಸಿಜೆಐ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿ ಗಮನ ಸೆಳೆದ ಪ್ರಕರಣದ ಬಗ್ಗೆ ನಿನ್ನೆ ಎರಡೂವರೆ ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಇಂದು ಮಧ್ಯಂತರ ಆದೇಶ ಬರುವ ಸಾಧ್ಯತೆ ಹೆಚ್ಚಾಗಿದೆ/ ಸ್ಪೀಕರ್ ಕೆಲಸದಲ್ಲಿ ಸುಪ್ರೀಂ ಹಸ್ತಕ್ಷೇಪ ವಿಚಾರವಾಗಿಯೂ ಇಂದು ಸುಪ್ರೀಂಕೋರ್ಟ್ನಲ್ಲಿ ತೀರ್ಮಾನವಾಗಲಿದೆ.
ಕಳೆದ ವಾರ ಅತೃಪ್ತ ಶಾಸಕರ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತ್ತು. ಅಲ್ಲದೆ, ಅತೃಪ್ತ ಶಾಸಕರು ಖುದ್ದಾಗಿ ಸ್ಪೀಕರ್ ಭೇಟಿಯಾಗಿ ರಾಜೀನಾಮೆ ಸಲ್ಲಿಸುವಂತೆ ತಿಳಿಸಿತ್ತು. ಅಲ್ಲದೆ, ಸ್ಪೀಕರ್ ತನ್ನ ನಿರ್ಧಾರ ತಿಳಿಸುವಂತೆ ಸೂಚಿಸಿತ್ತು. ಅದರಂತೆ ಮುಂಬೈನಿಂದ ವಿಧಾನಸೌಧಕ್ಕೆ ಆಗಮಿಸಿದ್ದ ಅತೃಪ್ತರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿದ್ದ ಸ್ಪೀಕರ್ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ಗೆ ತಿಳಿಸಿದ್ದರು. ನಂತರ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆಯನ್ನು ನಿನ್ನೆಗೆ ಮುಂದೂಡಲಾಗಿತ್ತು.
ನಿನ್ನೆ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮತ್ತು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ವಾದವನ್ನು ಆಲಿಸಿದ ಸಿಜೆಐ ನ್ಯಾಯಪೀಠ ವಿಚಾರಣೆಯನ್ನು ಇಂದಿಗೆ ಮುಂದೂಡಿದೆ. ಇಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಹೆಚ್ಚಾಗಿದ್ದು, ಈಗಾಗಲೇ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ತಳಮಳ ಶುರುವಾಗಿದೆ. ಸಿಎಂ ಕುಮಾರಸ್ವಾಮಿ ಅವರಿಗೆ ನಾಳೆ ವಿಶ್ವಾಸ ಮತಯಾಚನೆಗೆ ಸ್ಪೀಕರ್ ರಮೇಶ್ ಕುಮಾರ್ ಸಮಯ ನಿಗದಿ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.
ಅದಕ್ಕೂ ಮೊದಲೇ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದರೆ ಅದು ಮೈತ್ರಿ ಸರ್ಕಾರದ ಅಳಿವು-ಉಳಿವಿನ ಮೇಲೆ ಪರಿಣಾಮ ಬೀರಲಿದೆ. ಆ ಹಿನ್ನೆಲೆಯಲ್ಲಿ ಮೈತ್ರಿ ನಾಯಕರು ತೀರ್ಪಿಗಾಗಿ ಕಾಯುತ್ತಿದ್ದಾರೆ. ಇನ್ನು, ಬಿಜೆರಪಿ ನಾಯಕರಿಗೂ ಈ ತೀರ್ಪು ಬಹಳ ಮುಖ್ಯವಾಗಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗದೆ ಅವರು ಮುಂದಿನ ಹೆಜ್ಜೆ ಇಡಲು ಸಾಧ್ಯವಿಲ್ಲ. ಹೀಗಾಗಿ, ಸುಪ್ರೀಂಕೋರ್ಟ್ನ ತೀರ್ಪಿನ ಮೇಲೆ ರಾಜ್ಯ ಸರ್ಕಾರದ ಭವಿಷ್ಯ ನಿಂತಿದೆ ಎನ್ನಬಹುದು.
ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆಯನ್ನು ಅಂಗೀಕರಿಸುತ್ತಿಲ್ಲ ಎಂದು ಮೊದಲು 10 ಶಾಸಕರು, ಆಮೇಲೆ 5 ಶಾಸಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅತೃಪ್ತ ಶಾಸಕರ ಪರ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. ವಿಚಾರಣೆ ನಡೆಸದೆ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ. ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಶಾಸಕರು ಆಯ್ಕೆಯಾಗಿರುವ ಪಕ್ಷದಿಂದಲೇ ದೂರು ಬಂದಿದೆ. ರಾಜೀನಾಮೆ ಕೊಟ್ಟು ವಿನಾಕಾರಣ ಮುಂಬೈಗೆ ಹೋಗಿದ್ದಾರೆ. ಅತೃಪ್ತ ಶಾಸಕರ ನಡೆಗಳು ಅನುಮಾನಾಸ್ಪದವಾಗಿವೆ. ಶಾಸಕರ ಕುದುರೆ ವ್ಯಾಪಾರ ಬಗ್ಗೆಯೂ ಅನುಮಾನವಿದೆ. ಹಾಗಾಗಿ ಅವಸರದಲ್ಲಿ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ಬಳಿ ವಿಚಾರಣೆ ನಡೆಸಲು ಸಮಯ ಕೇಳಿದ್ದರು.
ತೀರ್ಪು ಏನೇ ಬಂದರೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟಾಗಲಿದೆ. ಅತೃಪ್ತ ಶಾಸಕರ ಪರ ತೀರ್ಪು ಬಂದರೆ ರಾಜ್ಯ ಸರ್ಕಾರ ಪತನವಾಗಲಿದೆ. ಸ್ಪೀಕರ್ ತೀರ್ಮಾನವೇ ಅಂತಿಮ ಎಂದು ಹೇಳಿದರೆ ಅತೃಪ್ತರಿಗೆ ಸಂಕಷ್ಟ ಎದುರಾಗಲಿದೆ. ಸ್ಪೀಕರ್ ಪರ ತೀರ್ಪು ಬಂದರೆ ಅತೃಪ್ತರನ್ನು ಅನರ್ಹತೆಯ ಭಯ ಕಾಡಲಿದೆ. ಆಗ ಮತ್ತೆ ಸರ್ಕಾರಕ್ಕೆ ಬೆಂಬಲ ನೀಡಲೇಬೇಕಾದ ಪರಿಸ್ಥಿತಿ ಬರಬಹುದು.