ಕುತೂಹಲ ಮೂಡಿಸಿದೆ ಕೇಂದ್ರ ಸರಕಾರ : ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆ?

ರಾಜ್ಯ ರಾಜಕೀಯ ಪ್ರಸ್ತುತ ನಾಟಕೀಯ ತಿರುವು ಪಡೆಯುತ್ತಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯಲಿರುವ ಕೇಂದ್ರ ರಾಜಕೀಯ ವ್ಯವಹಾರಗಳ ಸಂಫುಟ ಸಮಿತಿ ಸಭೆ ಕುತೂಹಲ ಮೂಡಿಸಿದೆ. ಅಲ್ಲದೆ ಈ ಸಭೆಯಲ್ಲಿ ರಾಜ್ಯದ ಮೇಲೆ ರಾಷ್ಟ್ರಪತಿ ಅಳ್ವಿಕೆ ಹೇರುವ ಕುರಿತ ತೀರ್ಮಾನ ತೆಗೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಕಾಣಿಸುತ್ತಿವೆ.

ಗುರುವಾರ ಸಿಎಂ ಕುಮಾರಸ್ವಾಮಿ ಅವರಿಗೆ ಆದೇಶಿಸಿದ್ದ ರಾಜ್ಯಪಾಲ ವಜುಭಾಯ್ ವಾಲಾ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಬಹುಮತ ಸಾಬೀತುಪಡಿಸಲು ಸೂಚಿಸಿದ್ದರು. ಆದರೆ, ಮೈತ್ರಿ ಸರ್ಕಾರ ರಾಜ್ಯಪಾಲರ ಈ ಆದೇಶವನ್ನು ಉಲ್ಲಂಘಿಸಿದೆ. ಹಾಗಾಗಿ ರಾಜ್ಯಪಾಲ ವಜುಭಾಯ್ ವಾಲಾ ಈ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ.

ಈ ವರದಿಯಲ್ಲಿ”ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ ಎಂಬ ವಿಚಾರ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ, ಬಹುಮತಯಾಚನೆಗೆ ಆದೇಶಿಸಿದ್ದರೂ ಸರ್ಕಾರ ಅದನ್ನು ಉಲ್ಲಂಘಿಸಿದೆ. ಇದರಿಂದ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದ್ದು, ಕೇಂದ್ರ ಮಧ್ಯಪ್ರವೇಶಿಸಬೇಕು” ಎಂದು ವರದಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯಪಾಲರ ಈ ವರದಿಯನ್ನು ಆಧರಿಸಿ ಶನಿವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ರಾಜ್ಯ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚೆ ಹಾಗೂ ರಾಜ್ಯಪಾಲರ ಶಿಫಾರಸುಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರುವ ಕುರಿತು ಸಹ ಈ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಾಳೆ ವಿಶ್ವಾಸಮತ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಸವರಾಜ​ ರಾಯರೆಡ್ಡಿ ಹೊಸ ಬಾಂಬ್!

ನಾಳೆ ವಿಶ್ವಾಸಮತ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಸವರಾಜ​ ರಾಯರೆಡ್ಡಿ ಹೊಸ ಬಾಂಬ್​ ಸಿಡಿಸಿದ್ದು, ವಿಶ್ವಾಸ ಮತಯಾಚನೆ ವೇಳೆ ಬಿಜೆಪಿಯವರಿಂದಲೂ ಬೆಂಬಲ ಸಿಗಬಹುದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಬುಧವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ನುಡಿದರು.

ಇನ್ನು ನಾಳೆ ವಿಶ್ವಾಸ ಮತಯಾಚನೆ ವೇಳೆ ಏನು ಬೇಕಾದ್ರೂ ಆಗಬಹುದು. ಬಿಜೆಪಿಯವರು ನಾಲ್ಕೈದು ಜನ ನಮಗೆ ಬೆಂಬಲಿಸಬಹುದು. ಇಲ್ಲವೇ ನಮ್ಮವರೇ ಬಂದು ಬೆಂಬಲವನ್ನೂ ನೀಡಬಹುದು. ವಿಶ್ವಾಸ ಮತಯಾಚನೆ ವೇಳೆ ಏನಾಗಲಿದೆ ಅನ್ನೋದನ್ನ ಕಾದು ನೋಡಿ ಎಂದು ಮಾಜಿ ಸಚಿವ ಬಸವರಾಜ​ ರಾಯರೆಡ್ಡಿ ಹೊಸ ಬಾಂಬ್​ ಸಿಡಿಸಿದ್ದಾರೆ.

ಸುಪ್ರೀಂಕೋರ್ಟ್​​ ತೀರ್ಪು ಮೈತ್ರಿ ಸರ್ಕಾರಕ್ಕೆ ಹಿನ್ನೆಡೆ ಅಲ್ಲ, ವಿಪ್ ಕೊಡೋದು ಸಂವಿಧಾನಾತ್ಮಕ ಹಕ್ಕು. ಕೋರ್ಟ್​ ತೀರ್ಪು ಸರಿಯಿದೆ. ಕಲಾಪಕ್ಕೆ ಭಾಗಿಯಾಗುವ ವಿಚಾರ ಶಾಸಕರಿಗೆ ಬಿಟ್ಟಿದ್ದು, ರಾಜೀನಾಮೆ ಅಂಗೀಕಾರ, ತಿರಸ್ಕಾರ ಸ್ಪೀಕರ್​​ಗೆ ಬಿಟ್ಟಿದ್ದು ಈ ಬಗ್ಗೆ ಸ್ಪೀಕರ್ ಇಂದು ಅಥವಾ ನಾಳೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದರು.

ಜುಲೈ 22 ರವರೆಗೂ ಸರ್ಕಾರದ ಅನಿಶ್ಚಿತತೆ ಮುಂದುವರಿಕೆ? : ಮುಖ್ಯಮಂತ್ರಿ ಕುಮಾರಸ್ವಾಮಿ

ಕರ್ನಾಟಕ ರಾಜ್ಯ ರಾಜಕೀಯ ಬಿಕ್ಕಟ್ಟು ಸದ್ಯದಲ್ಲಿ ಬಗೆಹರಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ, ಮುಂದಿನ ಸೋಮವಾರದವರೆಗೂ ಈ ಅನಿಶ್ಚಿತತೆ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

ಏಕೆಂದರೇ ಅತೃಪ್ತ ಶಾಸಕರ ಮನವೊಲಿಸಲು ಸಮಯ ಬೇಕಾಗಿರುವ ಕಾರಣ ಮುಂದಿನ ಸೋಮವಾರದವರೆಗೆ ಸದನದಲ್ಲಿ ವಿಶ್ವಾಸ ಮತ ಯಾಚನೆ ಸಂಬಂಧ ಚರ್ಚೆ ನಡೆಯಲಿದೆ, ಮೂಲಗಳ ಪ್ರಕಾರ ಗುರುವಾರ ವಿಶ್ವಾಸ ಮತಯಾಚನೆ ಕಾರ್ಯ ಆಗುವುದಿಲ್ಲ,

ಸಮ್ಮಿಶ್ರ ಸರ್ಕಾರದ ಮುಖಂಡರು ಬೇಕಂತಲೇ ಸದನವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ಹೀಗಾಗಿ ಮುಂದಿನ ಸೋಮವಾರ ಅಂದರೇ ಜುಲೈ 22 ರವರೆಗೆ ಸದನವನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ., ಸದನದಲ್ಲಿ ಮಾತನಾಡುವರ ಸಂಖ್ಯೆ ಹೆಚ್ಚಿಸಿ ಆ ಮೂಲಕ ಸಮಯವನ್ನು ತಮ್ಮದಾಗಿಸಿಕೊಳ್ಳಲು ಸಮ್ಮಿಶ್ರ ಸರ್ಕಾರದ ಮುಖಂಡರು ಪ್ಲಾನ್ ಮಾಡಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಜಿ ಪರಮೇಶ್ವರ್ ಹಾಗೂ ಡಿ.ಕೆ ಶಿವಕುಮಾರ್ ವಿಶ್ವಾಸ ಮತಯಾಚನೆ ವೇಳೆ ಮಾತನಾಡಲಿದ್ದಾರೆ. ಸೋಮವಾರ ಅಥವಾ ಪ್ರಶಸ್ತ ಗಳಿಗೆಯಲ್ಲಿ ಸಿಎಂ ತಮ್ಮ ಹುದ್ದೆಗೆ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ವಿಶ್ವಾಸಮತ ಯಾಚನೆ ಏಕೆ ಅನಿವಾರ್ಯ ಎಂಬದನ್ನು ನಾವು ದಾಖಲೆಯಲ್ಲಿ ತರಲು ಬಯಸುತ್ತೇವೆ, ಸರ್ಕಾರವನ್ನು ಬೀಳಿಸಲು ಅವರು ಎಷ್ಟೆಲ್ಲಾ ಪ್ರಯತ್ನ ಮಾಡಿದರು ಎಂಬ ಬಗ್ಗೆ ಎಲ್ಲರಿಗೂ ತಿಳಿಯಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ನಮ್ಮ ಶಾಸಕರು ವಾಪಸ್ ಬರಲಿದ್ದಾರೆ. ಮುಂಬಯಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅವರನ್ನು ಲಾಕ್ ಮಾಡಲಾಗಿದೆ. ಅವರ ಫೋನ್ ಗಳನ್ನು ಅವರಿಂದ ಕಸಿದುಕೊಳ್ಳಲಾಗಿದೆ, ಸಂಪೂರ್ಣವಾಗಿ ಅವರನ್ನು ಬಂಧನದಲ್ಲಿರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಸಿಎಂ ನಡೆ : ದಿಢೀರ್ ಪ್ರಯಾಣ

ರಾಜ್ಯ ರಾಜಕೀಯ ಪ್ರಹಸನದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ. 

ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ HAL ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ದಿಲ್ಲಿಗೆ ತೆರಳುವ ಸಾಧ್ಯತೆ ಇದೆ. ಈ ನಡೆ ಕುತೂಹಲಕ್ಕೆ ಕಾರಣವಾಗಿದೆ. 

ಸುಪ್ರೀಂ ತೀರ್ಪು ಬೆನ್ನಲ್ಲೇ ಸಿಎಂ ವಿಮಾನ ನಿಲ್ದಾಣಕ್ಕೆ ತೆರಳಿದ್ದು,  ದಿಲ್ಲಿಗೆ ತೆರಳಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭೇಟಿ ಮಾಡುವ ಸಾಧ್ಯತೆ ಇದೆ. ಆದರೆ ಸಿಎಂ ಪ್ರಯಾಣದ ಹಾದಿ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.

ಅವಿಶ್ವಾಸ ನಿರ್ಣಯದ ವೇಳೆ ಅತೃಪ್ತರಾಗಿ ರಾಜೀನಾಮೆ ನೀಡಿ ಹೋದ ಶಾಸಕರು ಆಗಮಿಸಬಹುದು ಅಥವಾ, ಆಗಮಿಸದೇ ಇರಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅವರಿಗೆ ಆಗಮಿಸಲು ಯಾವುದೇ ಒತ್ತಡ ಹೇರುವಂತಿಲ್ಲ ಎಂದು ತೀರ್ಪು ಬಂದಿದೆ. ಇದು ಮೈತ್ರಿ ನಾಯಕರಲ್ಲಿ ಆತಂಕ ಮೂಡಿಸಿದ್ದು, ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.

ಸ್ಪೀಕರ್ ಒಂದು ಎಡವಟ್ಟು ಬಿಜೆಪಿಗೇ ಬಾರಿ ಲಾಭ? ಬಂಡಾಯ ಶಾಸಕರ ಕೈಯಲ್ಲಿ ದೋಸ್ತಿ ಸರ್ಕಾರದ ಜುಟ್ಟು!

ಸರ್ಕಾರದ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿದ್ದ ಬಂಡಾಯ ಶಾಸಕರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ರಾಜೀನಾಮೆ ಅಂಗೀಕಾರವಾಗದೇ ಅತಂತ್ರ ಮತ್ತು ಅನಿಶ್ಚಿತ ಸ್ಥಿತಿಯಲ್ಲಿದ್ದ ಅತೃಪ್ತರಿಗೆ ಸುಪ್ರೀಂ ಕೋರ್ಟ್ ತೀರ್ಪು ಬಲ ಕೊಟ್ಟಿದೆ.

ಗುರುವಾರ ನಡೆಯುವ ವಿಶ್ವಾಸ ಮತಯಾಚನೆಗೆ ಬಂಡಾಯ ಶಾಸಕರನ್ನು ಹಾಜರಾಗಲೇಬೇಕೆಂದು ಒತ್ತಾಯಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂದರೆ, ಅತೃಪ್ತ ಶಾಸಕರಿಗೆ ವಿಪ್ ಹೊರಡಿಸಲು ಸಾಧ್ಯವಾಗುವುದಿಲ್ಲ. ಇದು ಬಿಜೆಪಿ ಪಾಲಿಗೆ ವರದಾನವಾಗಿದೆ.

ವಿಶ್ವಾಸ ಮತ ಯಾಚನೆ ವೇಳೆ 15 ಅತೃಪ್ತ ಶಾಸಕರು ಗೈರಾದರೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಂತಾಗುತ್ತದೆ. ಬಿಜೆಪಿಯಿಂದ ರಾತ್ರೋರಾತ್ರಿ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರನ್ನು ಸೆಳೆದುಕೊಂಡರೆ ಮಾತ್ರ ಮೈತ್ರಿಸರ್ಕಾರ ಉಳಿಯಲು ಸಾಧ್ಯ. ಇಲ್ಲವಾದಲ್ಲಿ ಸರ್ಕಾರದ ಪತನ ತಡೆಯಲು ಸಾಧ್ಯವಿಲ್ಲ.

ಒಂದು ವೇಳೆ, ಸ್ಪೀಕರ್ ರಮೇಶ್ ಕುಮಾರ್ ಅವರು 15 ಶಾಸಕರನ್ನು ಅನರ್ಹಗೊಳಿಸುವ ಕಡುನಿರ್ಧಾರಕ್ಕೆ ಬಂದರೂ ಮೈತ್ರಿ ಸರ್ಕಾರದ ಪತನವನ್ನು ತಡೆಯಲು ಸಾಧ್ಯವಿಲ್ಲ.

ಅತೃಪ್ತರ ಕೈಲಿದೆ ಸರ್ಕಾರದ ಭವಿಷ್ಯ:
ಆದರೆ, ಮೈತ್ರಿ ಸರ್ಕಾರ ಉಳಿಸುವ ಏಕೈಕ ಮಾರ್ಗ ಇರುವುದು ಅತೃಪ್ತರಲ್ಲೇ. ಅಂದರೆ, ರಾಜೀನಾಮೆ ನೀಡಿರುವ ಬಂಡಾಯ ಶಾಸಕರು ದಿಢೀರ್ ಮನಸು ಬದಲಾಯಿಸಿ ನಾಳೆ ವಿಶ್ವಾಸ ಮತ ಯಾಚನೆಗೆ ಬಂದು ಮೈತ್ರಿ ಸರ್ಕಾರದ ಪರ ವೋಟು ಚಲಾಯಿಸಿದರೆ ಕುಮಾರಸ್ವಾಮಿ ಸರ್ಕಾರ ಉಳಿಯಲು ಸಾಧ್ಯ. ಪ್ರಸಕ್ತ ಸಂದರ್ಭದಲ್ಲಿ ಇದು ಬಹುತೇಕ ಅಸಾಧ್ಯವೆಂಬಂತಿದೆ.

ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ಧಾರೆ. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ. ಅತೃಪ್ತ ಶಾಸಕರಿಗೆ ಸಿಕ್ಕ ನೈತಿಕ ಜಯವಾಗಿದೆ. ಸ್ಪೀಕರ್ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮಿತಿಗೊಳಿಸಿದೆ. ಇದು ಸ್ವಾಗತಾರ್ಹ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಇನ್ನು, ಕೆ.ಎಸ್. ಈಶ್ವರಪ್ಪ ಅವರು ಸಿಎಂ ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದ್ಧಾರೆ. ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಗೊತ್ತಿದ್ರೂ ನಾಳೆ ವಿಶ್ವಾಸಮತ ಯಾಚನೆ ಯಾಕೆ? ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಮಾಜಿ ಉಪಮುಖ್ಯಮಂತ್ರಿಯೂ ಆದ ಈಶ್ವರಪ್ಪ ಆಗ್ರಹಿಸಿದ್ದಾರೆ.

ಸರ್ಕಾರದ ಪತನ ಹೇಗೆ?
ಕರ್ನಾಟಕ ವಿಧಾನಸಭೆ ಬಲಾಬಲ: 224
ರಾಜೀನಾಮೆ ನೀಡಿರುವ ಶಾಸಕರು: 16
ವಿಶ್ವಾಸ ಮತಯಾಚನೆಯ ದಿನ ಇವರು ಗೈರಾದಲ್ಲಿ ಸದನದ ಬಲ 108ಕ್ಕೆ ಇಳಿಕೆ
ವಿಶ್ವಾಸಮತ ಗೆಲ್ಲಲು ಬೇಕಾದ ಬಹುಮತ: 105
ಮೈತ್ರಿ ಸರ್ಕಾರದ ಬಲ: 119-18 = 101

ಬಿಜೆಪಿಯ ಬಲ: 105+2 = 107

ರಾಜ್ಯ ರಾಜಕಾರಣದಲ್ಲಿ ಮಹತ್ತರ ತಿರುವು : ಸುಪ್ರೀಂ ತೀರ್ಪಿನ ಹೀನ್ನಲ್ಲೇ ಅತೃಪ್ತ ಶಾಸಕರ ಪುಲ್ಲ ಆಕ್ಟಿವ್; ಮುಂದಿನ ನಡೆ ಪ್ರಕಟ!

ರಾಜ್ಯ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿದ್ದು, ಇದು ಸ್ಪೀಕರ್ ಹಾಗೂ ಅತೃಪ್ತ ಶಾಸಕರು ಇಬ್ಬರಿಗೂ ರಿಲೀಫ್ ನೀಡಿದೆ.

ಹೀಗಿದ್ದರೂ ತೀರ್ಪಿನಿಂದ ಸರ್ಕಾರ ಪತನಗೊಳ್ಳುವ ಲಕ್ಷಣಗಳು ಮಾತ್ರ ಮತ್ತಷ್ಟು ಹೆಚ್ಚಾಗಿವೆ. ಸದ್ಯ ಈ ಎಲ್ಲಾ ಹೈಡ್ರಾಮಾದ ಬೆನ್ನಲ್ಲೇ ಅತೃಪ್ತ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ತಮ್ಮ ಮುಂದಿನ ನಡೆ ಏನು ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ.

ಸುಪ್ರಿಂ ಮಧ್ಯಂತರ ತೀರ್ಪು ಪ್ರಕಟಿಸಿದ ಬಳಿಕ ಪ್ರತಿಕ್ರಿಯಿಸಿರುವ ಅತೃಪ್ತ ಶಾಸಕರು ‘ಸುಪ್ರೀಂಕೋರ್ಟ್ ನೀಡಿರುವ ತೀರ್ಪುನ್ನು ನಾವು ಸ್ವಾಗತಿಸುತ್ತೇವೆ. ರಾಜೀನಾಮೆ ನೀಡಿರುವ ನಾವು ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ. ವಿಶ್ವಾಸಮತ ಯಾಚನೆ ಹಿನ್ನೆಲೆ ಸದನಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಯಾವ ಕಾರಣಕ್ಕೂ ವಾಪಸ್ ಹೋಗಲ್ಲ, ನಮ್ಮ ನಿರ್ಧಾರಕ್ಕೆ ಬದ್ಧ’ ಎಂದಿದ್ದಾರೆ. ಈ ಪ್ರತಿಕ್ರಿಯೆಯಿಂದ ಸರ್ಕಾರ ಬೀಳುವುದು ಬಹುತೇಕ ಖಚಿತವಾಗಿದೆ.

ಕಳೆದೆರಡು ವಾರದಿಂದ ಏನೇನಾಯ್ತು?
ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಅತೃಪ್ತ ಶಾಸಕರು ಅದೇನೇ ಮಾಡಿದರೂ ಮರಳಿ ಬರಲು ಒಪ್ಪಿರಲಿಲ್ಲ. ದೋಸ್ತಿ ನಾಯಕರು ಅತೃಪ್ತ ಶಾಸಕರನ್ನು ಓಲೈಸಿ ಮರಳಿ ಕರೆ ತರಲು ಯತ್ನಿಸುತ್ತಿರುವಾಗಲೇ ರಾಜೀನಾಮೆ ಅಂಗೀಕರಿಸಲು ವಿಳಂಬವಾಗುತ್ತಿದೆ ಎಂದು ದೂರಿ ಸುಪ್ರೀಂ ಕದ ತಟ್ಟಿದ್ದರು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಮಧ್ಯಂತರ ತೀರ್ಪು ಪ್ರಕಟಿಸಿದ್ದು ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗುವುದಿಲ್ಲ. ವಿಶ್ವಾಸಮತದ ವೇಳೆ ಸದನದಲ್ಲಿ ಹಾಜರಿರುವುದು ಅವರ ವಿವೆಚನೆಗೆ ಬಿಟ್ಟಿದ್ದು ಎಂದಿದೆ. ಇನ್ನು ಸರ್ಕಾರ ಉಳಿಯಬೇಕಿದ್ದರೆ ಅತೃಪ್ತ ಶಾಸಕರೇ ಮನಸ್ಸು ಬದಲಾಯಿಸಿ ಮರಳಬೇಕಷ್ಟೇ.

ಒಂದು ವರ್ಷದಲ್ಲಿ ನಿಮ್ಮಿಂದ ಆಗಿರೋದು ಸಾಕು, ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ – ಸಚಿವ ರೇವಣ್ಣ ಭವಿಷ್ಯ

ಒಂದು ವರ್ಷದಲ್ಲಿ ನಿಮ್ಮಿಂದ ಆಗಿರೋದು ಸಾಕು, ದೇವರೇ ನಿಮಗೆ ಶಿಕ್ಷೆ ಕೊಡೋ ಕಾಲ ಬರುತ್ತೆ ಎಂದು ಮಾಧ್ಯಮಗಳ ಮೇಲೆ ಲೋಕಪಯೋಗಿ ಸಚಿವ ಹೆಚ್​.ಡಿ  ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.

ನಿಮ್ಮಿಂದ ಆಗಿರೋದೆ ಸಾಕು

ಚಾಮರಾಜಪೇಟೆಯ ಶೃಂಗೇರಿ ಶಾರದಾ ಪೀಠದಲ್ಲಿ ಬುಧವಾರ ಹೋಮ ಹವನ ಮಾಡಿಸುತ್ತಿರುವ ವೇಳೆ ಮಾಧ್ಯಮಗಳ ಮೇಲೆ ಗರಂ ಆದ ರೇವಣ್ಣ ಇದು ವೈಯಕ್ತಿಕ ಪೂಜೆ. ಯಾಕೆ ಇಲ್ಲಿಗೆ ಬಂದಿದ್ದೀರಾ..? ಒಂದು ವರ್ಷದಿಂದ ನಿಮ್ಮಿಂದ ಆಗಿರೋದೆ ಸಾಕು ಎಂದು ಕಿಡಿಕಾರಿದರು.

ಸತತ ಅರ್ಧ ಗಂಟೆಗೂ ಹೆಚ್ಚಿನ ಕಾಲ ಪೀಠದ ಒಳಗೆ ಪೂಜೆ

ಶತಾಯ ಗತಾಯ ಸರ್ಕಾರವನ್ನು ಉಳಿಸಿಕೊಳ್ಳಲೇ ಬೇಕೆಂದು ಪಣ ತೊಟ್ಟಿರುವ ರೇವಣ್ಣ ಮತ್ತು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ದೇವಸ್ಥಾನದ ಭೇಟಿ ಮುಂದುವರೆಸಿದ್ದಾರೆ. ಚಾಮರಾಜ ಪೇಟೆಯ ಶೃಂಗೇರಿ ಶಾರದಾ ಪೀಠದಲ್ಲಿ ಹೋಮ ಹವನ ಮಾಡಿಸುತ್ತಿರುವ ಕುಟುಂಬದವರು ಸತತ ಅರ್ಧ ಗಂಟೆಗೂ ಹೆಚ್ಚಿನ ಕಾಲ ಪೀಠದ ಒಳಗೆ ಪೂಜೆ ಮಾಡಿಸಲಾಗುತ್ತಿದೆ.

ಕಾಲಿಗೆ ಚಪ್ಪಲಿಯನ್ನೂ ಹಾಕದೇ ಓಡಾಡುತ್ತಿರುವ ಸಚಿವ ರೇವಣ್ಣ

ಸತತ ಒಂದು ವಾರದಿಂದ ಕಾಲಿಗೆ ಚಪ್ಪಲಿಯನ್ನೂ ಹಾಕದೇ ಓಡಾಡುತ್ತಿರುವ ಸಚಿವ ರೇವಣ್ಣ ದಿನದ 24 ಗಂಟೆಯಲ್ಲಿ 20 ಗಂಟೆಯನ್ನು ದೇವಸ್ಥಾನಗಳಲ್ಲೇ ಕಳೆಯುತ್ತಿದ್ದಾರೆ ಎನ್ನಬಹುದು. ಮೊನ್ನೆ ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸ್ಲಲಿಸಿದ್ದರು, ಬೆಂಗಳೂರಿನಲ್ಲಿ ಗಣಪತಿ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ ಮಾಡಿಸಿದ್ದರು. ಇನ್ನು ಉಡುಪಿಯಲ್ಲಿರುವ ದೇವಸ್ಥಾನಗಳಿಗೆ ಹೋಗಿ ಬಂದರು. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಕೂಡ ಸಲ್ಲಿಸಿದ್ದಾರೆ. ಇಂದು ಚಾಮರಾಜ ಪೇಟೆಯ ಶೃಂಗೇರಿ ಶಾರದಾ ಪೀಠದಲ್ಲಿ ಕುಟುಂಬ ಸಮೇತ ಹೋಗಿ ಪೂಜೆ ಸಲ್ಲಿಸಿದ್ದಾರೆ.

ಸುಪ್ರೀಂ ತೀರ್ಪು: ಸ್ಪೀಕರ್ ಹಾಗೂ ಅತೃಪ್ತ ಶಾಸಕರಿಗೆ ನಿರಾಳ, ಸರ್ಕಾರಕ್ಕೆ ಆತಂಕ!

ರಾಜೀನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಹಾಗೂ ಅತೃಪ್ತ ಶಾಸಕರ ನಡುವಿನ ಗುದ್ದಾಟಕ್ಕೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್ ಇಬ್ಬರ ಹಕ್ಕುಗಳನ್ನೂ ಎತ್ತಿ ಹಿಡಿದಿದೆ. ಆದರೆ ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಸರ್ಕಾರಕ್ಕೆ ಪತನಗೊಳ್ಳುವ ಭೀತಿ ಎದುರಾಗಿದೆ.

ಹೌದು ಕಳೆದೆರಡು ವಾರದಿಂದ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದೆ. ಒಂದೆಡೆ 15 ಅತಪ್ತ ಶಾಸಕರು ರಾಜೀನಾಮೆ ಸಲ್ಲಿಸಿ ಮುಂಬೈ ಹೋಟೇಲ್ ಸೇರಿದ್ದರೆ, ಇತ್ತ ದೋಸ್ತಿ ನಾಯಕರು ಅವರ ಮನವೊಲಿಲು ಯತ್ನಿಸಿದ್ದರು. ಆದರೆ ಯಾವುದಕ್ಕೂ ಜಗ್ಗದ ಅತೃಪ್ತ ಶಾಸಕರು ರಾಜೀನಾಮೆ ಅಂಗೀಕಾರಕ್ಕೆ ಸುಪ್ರೀಂ ಬಾಗಿಲು ತಟ್ಟಿದ್ದರು. ಹೀಗಿರುವಾಗ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವ ದಾಳವೆಸೆದಿದ್ದರು. ಅಲ್ಲದೇ ಎಲ್ಲಾ ಶಾಸಕರು ಸದನಕ್ಕೆ ಹಾಜರಾಗಬೇಕೆಂದು ವಿಪ್ ಜಾರಿಗೊಳಿಸಿದ್ದರು.

ಆದರೀಗ ಸರ್ಕಾರ ಉಳಿಸಿಕೊಳ್ಳುವ ಯತ್ನದಲ್ಲಿದ್ದ ದೋಸ್ತಿಗೆ ಸುಪ್ರೀಂ ತೀರ್ಪಿನಿಂದ ಹಿನ್ನಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸರ್ಕಾರ ನಾಳೆ ಗುರುವಾರ ವಿಶ್ವಾಸಮತ ಯಾಚಿಸಬಹುದು ಎಂದು ತಿಳಿಸಿದೆಯಾದರೂ, ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಅಲ್ಲದೇ ಈಗಾಗಲೇ ಸರ್ರಕಾರ ಜಾರಿಗೊಳಿಸಿರುವ ವಿಪ್ ರಾಜೀನಾಮೆ ಸಲ್ಲಿಸಿರುವ 15 ಅತೃಪ್ತ ಶಾಸಕರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅವರು ಅನರ್ಹಗೊಳ್ಳುವ ಬೀತಿಯಿಂದಲೂ ಪಾರಾಗಿದ್ದಾರೆ.

View Post

ಒಂದು ವೇಳೆ ಅತೃಪ್ತ ಶಾಸಕರು ವಿಶ್ವಾಸಮತ ಯಾಚನೆ ವೇಳೆ ಹಾಜರಾಗದಿದ್ದರೆ ಸರ್ಕಾರ ಅಲ್ಪಮತಕ್ಕೆ ಕುಸಿದು ಪತನಗೊಳ್ಳಲಿದೆ. ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ 5 ವರ್ಷದ ಅವಧಿ ಪೂರ್ಣಗೊಳಿಸುವ ಮೊದಲೇ ಬೀಳಲಿದೆ.

ಸಿಎಂ ಕುಮಾರಸ್ವಾಮಿ ಎದುರಿರುವ ದಾರಿಯೇನು?

  1. ಸುಪ್ರೀಂಕೋರ್ಟ್ ತೀರ್ಪಿನಿಂದ ಮುಖ್ಯಮಂತ್ರಿಗೆ ಹಿನ್ನಡೆ
  2. ನಾಳೆ ವಿಶ್ವಾಸಮತ ಯಾಚಿಸುವ ನಿರ್ಧಾರ ಕೈಬಿಡಬಹುದ
  3. ವಿಶ್ವಾಸಮತ ಯಾಚಿಸಿದೇ ವಿದಾಯ ಭಾಷಣ ಮಾಡಬಹುದು
  4. ವಿದಾಯ ಭಾಷಣದ ಬಳಿಕ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಬಹುದು

ಸರ್ಕಾರ ಉಳಿಯಬೇಕೆಂದರೆ ಅತೃಪ್ತ ಶಾಸಕರು ವಿಶ್ವಾಸಮತ ಯಾಚನೆ ವೇಳೆ ಸದನದಲ್ಲಿ ಹಾಜರಿಲೇಬೇಕು. ಸರ್ಕಾರ ಉಳಿಯುತ್ತಾ? ಬೀಳುತ್ತಾ? ವಿಶ್ವಾಸಮತ ಯಾಚನೆ ವೇಳೆಯಷ್ಟೇ ತಿಳಿಯಲಿದೆ.

Speaker vs Rebel MLAs ಇಂದು ಸುಪ್ರೀಂಕೋರ್ಟ್​ನಿಂದ ಹೊರಬೀಳಲಿದೆ ಮಹತ್ವದ ತೀರ್ಪು

ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನಗೊಂಡ ಜೆಡಿಎಸ್- ಕಾಂಗ್ರೆಸ್ನ ಶಾಸಕರು ಸ್ಪೀಕರ್ ಕಚೇರಿಗೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸ್ವೀಕರಿಸುವಲ್ಲಿ ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಮಾಡುತ್ತಿರುವುದರನ್ನು ಪ್ರಶ್ನಿಸಿ 15 ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ನಿನ್ನೆ ಆ ಅರ್ಜಿಯ ಮಹತ್ವದ ವಿಚಾರಣೆ ನಡೆಸಿದ್ದ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ವಿಚಾರಣೆಯನ್ನು ಇಂದಿಗೆ ಮುಂದೂಡಿದ್ದರು.

ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು ಹೊರಬೀಳಲಿದೆ. ಸಿಜೆಐ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿ ಗಮನ ಸೆಳೆದ ಪ್ರಕರಣದ ಬಗ್ಗೆ ನಿನ್ನೆ ಎರಡೂವರೆ ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಇಂದು ಮಧ್ಯಂತರ ಆದೇಶ ಬರುವ ಸಾಧ್ಯತೆ ಹೆಚ್ಚಾಗಿದೆ/ ಸ್ಪೀಕರ್ ಕೆಲಸದಲ್ಲಿ ಸುಪ್ರೀಂ ಹಸ್ತಕ್ಷೇಪ ವಿಚಾರವಾಗಿಯೂ ಇಂದು ಸುಪ್ರೀಂಕೋರ್ಟ್ನಲ್ಲಿ ತೀರ್ಮಾನವಾಗಲಿದೆ.

ಕಳೆದ ವಾರ ಅತೃಪ್ತ ಶಾಸಕರ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತ್ತು. ಅಲ್ಲದೆ, ಅತೃಪ್ತ ಶಾಸಕರು ಖುದ್ದಾಗಿ ಸ್ಪೀಕರ್ ಭೇಟಿಯಾಗಿ ರಾಜೀನಾಮೆ ಸಲ್ಲಿಸುವಂತೆ ತಿಳಿಸಿತ್ತು. ಅಲ್ಲದೆ, ಸ್ಪೀಕರ್ ತನ್ನ ನಿರ್ಧಾರ ತಿಳಿಸುವಂತೆ ಸೂಚಿಸಿತ್ತು. ಅದರಂತೆ ಮುಂಬೈನಿಂದ ವಿಧಾನಸೌಧಕ್ಕೆ ಆಗಮಿಸಿದ್ದ ಅತೃಪ್ತರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ರಾಜೀನಾಮೆ ಪತ್ರಗಳನ್ನು ಸ್ವೀಕರಿಸಿದ್ದ ಸ್ಪೀಕರ್ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್ಗೆ ತಿಳಿಸಿದ್ದರು. ನಂತರ ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆಯನ್ನು ನಿನ್ನೆಗೆ ಮುಂದೂಡಲಾಗಿತ್ತು.

ನಿನ್ನೆ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮತ್ತು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರ ವಾದವನ್ನು ಆಲಿಸಿದ ಸಿಜೆಐ ನ್ಯಾಯಪೀಠ ವಿಚಾರಣೆಯನ್ನು ಇಂದಿಗೆ ಮುಂದೂಡಿದೆ. ಇಂದು ತೀರ್ಪು ಪ್ರಕಟವಾಗುವ ಸಾಧ್ಯತೆ ಹೆಚ್ಚಾಗಿದ್ದು, ಈಗಾಗಲೇ ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ತಳಮಳ ಶುರುವಾಗಿದೆ. ಸಿಎಂ ಕುಮಾರಸ್ವಾಮಿ ಅವರಿಗೆ ನಾಳೆ ವಿಶ್ವಾಸ ಮತಯಾಚನೆಗೆ ಸ್ಪೀಕರ್ ರಮೇಶ್ ಕುಮಾರ್ ಸಮಯ ನಿಗದಿ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.

ಅದಕ್ಕೂ ಮೊದಲೇ ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದರೆ ಅದು ಮೈತ್ರಿ ಸರ್ಕಾರದ ಅಳಿವು-ಉಳಿವಿನ ಮೇಲೆ ಪರಿಣಾಮ ಬೀರಲಿದೆ. ಆ ಹಿನ್ನೆಲೆಯಲ್ಲಿ ಮೈತ್ರಿ ನಾಯಕರು ತೀರ್ಪಿಗಾಗಿ ಕಾಯುತ್ತಿದ್ದಾರೆ. ಇನ್ನು, ಬಿಜೆರಪಿ ನಾಯಕರಿಗೂ ಈ ತೀರ್ಪು ಬಹಳ ಮುಖ್ಯವಾಗಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗದೆ ಅವರು ಮುಂದಿನ ಹೆಜ್ಜೆ ಇಡಲು ಸಾಧ್ಯವಿಲ್ಲ. ಹೀಗಾಗಿ, ಸುಪ್ರೀಂಕೋರ್ಟ್ನ ತೀರ್ಪಿನ ಮೇಲೆ ರಾಜ್ಯ ಸರ್ಕಾರದ ಭವಿಷ್ಯ ನಿಂತಿದೆ ಎನ್ನಬಹುದು.

ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆಯನ್ನು ಅಂಗೀಕರಿಸುತ್ತಿಲ್ಲ ಎಂದು ಮೊದಲು 10 ಶಾಸಕರು, ಆಮೇಲೆ 5 ಶಾಸಕರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅತೃಪ್ತ ಶಾಸಕರ ಪರ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು. ವಿಚಾರಣೆ ನಡೆಸದೆ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ. ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಶಾಸಕರು ಆಯ್ಕೆಯಾಗಿರುವ ಪಕ್ಷದಿಂದಲೇ ದೂರು ಬಂದಿದೆ. ರಾಜೀನಾಮೆ ಕೊಟ್ಟು ವಿನಾಕಾರಣ ಮುಂಬೈಗೆ ಹೋಗಿದ್ದಾರೆ. ಅತೃಪ್ತ ಶಾಸಕರ ನಡೆಗಳು ಅನುಮಾನಾಸ್ಪದವಾಗಿವೆ. ಶಾಸಕರ ಕುದುರೆ ವ್ಯಾಪಾರ ಬಗ್ಗೆಯೂ ಅನುಮಾನವಿದೆ. ಹಾಗಾಗಿ ಅವಸರದಲ್ಲಿ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ಬಳಿ ವಿಚಾರಣೆ ನಡೆಸಲು ಸಮಯ ಕೇಳಿದ್ದರು.

ತೀರ್ಪು ಏನೇ ಬಂದರೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟಾಗಲಿದೆ. ಅತೃಪ್ತ ಶಾಸಕರ ಪರ ತೀರ್ಪು ಬಂದರೆ ರಾಜ್ಯ ಸರ್ಕಾರ ಪತನವಾಗಲಿದೆ. ಸ್ಪೀಕರ್ ತೀರ್ಮಾನವೇ ಅಂತಿಮ ಎಂದು ಹೇಳಿದರೆ ಅತೃಪ್ತರಿಗೆ ಸಂಕಷ್ಟ ಎದುರಾಗಲಿದೆ. ಸ್ಪೀಕರ್ ಪರ ತೀರ್ಪು ಬಂದರೆ ಅತೃಪ್ತರನ್ನು ಅನರ್ಹತೆಯ ಭಯ ಕಾಡಲಿದೆ. ಆಗ ಮತ್ತೆ ಸರ್ಕಾರಕ್ಕೆ ಬೆಂಬಲ ನೀಡಲೇಬೇಕಾದ ಪರಿಸ್ಥಿತಿ ಬರಬಹುದು.

BREAKING NEWS: ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ.!

ಮಹತ್ವದ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸ್ವತಂತ್ರ ದೇವ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.

ಈ ಮೊದಲು ರಾಜ್ಯಾಧ್ಯಕ್ಷರಾಗಿದ್ದ ಮಹೇಂದ್ರ ನಾಥ್ ಪಾಂಡೆ ಪ್ರಧಾನಿ ಮೋದಿ ಸಂಪುಟ ಸೇರಿದ ಹಿನ್ನೆಲೆಯಲ್ಲಿ, ಹಿಂದುಳಿದ ವರ್ಗದ ನಾಯಕರಾದ ಸ್ವತಂತ್ರ ದೇವ್ ಸಿಂಗ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಬಿಸಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಬಲ ಕುರ್ಮಿ ಸಮುದಾಯಕ್ಕೆ ಸೇರಿದ ಸ್ವತಂತ್ರ ದೇವ್ ಸಿಂಗ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಸಿಎಂ ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಾರಿಗೆ ಸಚಿವರಾಗಿರುವ ಸ್ವತಂತ್ರ ದೇವ್ ಸಿಂಗ್, ರಾಜ್ಯದ ಜನಪ್ರಿಯ ಹಿಂದುಳಿದ ವರ್ಗದ ನಾಯಕರಲ್ಲಿ ಮುಂಚೂಣಿಯಲ್ಲಿದ್ದಾರೆ.