ನಾಳೆ ದೋಸ್ತಿ ಭವಿಷ್ಯ ಏನಾಗಬಹುದು? ಸ್ಪೀಕರ್ ಮತ್ತು ಅತೃಪ್ತ ಶಾಸಕರು ಹಾಗೂ ಸಿಎಂ ಕುಮಾರಸ್ವಾಮಿ ಮುಂದೆ ಉಳಿದಿರುವ ಆಯ್ಕೆಗಳು ಇಷ್ಟು!

ಸ್ಪೀಕರ್ ಮತ್ತು ಅತೃಪ್ತ ಶಾಸಕರು ಹಾಗೂ ಸಿಎಂ ಕುಮಾರಸ್ವಾಮಿ ಪರ ವಕೀಲರ ವಾದ ಆಲಿಸಿದ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ಕಾಯ್ದಿರಿಸಿದೆ. ಹಾಗಾದರೆ ಈಗ ಇರುವ ಆಯ್ಕೆಗಳು ಏನು? ಉಳಿದುಕೊಂಡಿರುವ ಪ್ರಶ್ನೆಗಳು ಏನು?

ಸ್ಪೀಕರ್ ವಿಚಾರದಲ್ಲಿ ಅಥವಾ ಸ್ಪೀಕರ್ ಗೆ ಸಂಬಂಧಿಸಿದ ಪರಮಾಧಿಕಾರದಲ್ಲಿ ಸುಪ್ರಿಂ ಕೋರ್ಟ್ ಹಸ್ತಕ್ಷೇಪ ಮಾಡಬಹುದೆ? ಎನ್ನುವುದು ಬಹುದೊಡ್ಡ ಪ್ರಶ್ನೆ. ಇದನ್ನು ಶಾಸಕಾಂಗ ಮತ್ತು ನ್ಯಾಯಾಂಗ ನಡುವಿನ ತಿಕ್ಕಾಟ ಎಂದು ವಿಶ್ಲೇಷಣೆ ಮಾಡಲಾಗಿದೆ.

ಮೂರು ವಾದಗಳು…
ಅತೃಪ್ತ ಶಾಸಕರು: ನಾವು ಸ್ವಯಂ ಆಗಿ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ಅಂಗೀಕಾರ ಮಾಡುವುದು ಸಂವಿಧಾನಬದ್ಧ

ಸ್ಪೀಕರ್ ವಕೀಲರ ವಾದ: ಸ್ಪೀಕರ್ ಸಂವಿಧಾನಬದ್ಧವಾಗಿಯೇ ಇದ್ದು, ಸ್ಪೀಕರ್ ಪರಮಾಧಿಕಾರದಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಬಾರದು.

ಸಿಎಂ ವಕೀಲರ ವಾದ: ಶಾಸಕರ ರಾಜೀನಾಮೆ ಹಿಂದೆ ಸರಕಾರ ಬೀಳಿಸುವ ತಂತ್ರ ಇದ್ದು, ನ್ಯಾಯಾಲಯ ವಿಚಾರವನ್ನು ಸ್ಪೀಕರ್ ವಿವೇಚನೆಗೆ ಬಿಡಬೇಕು.

ಉಳಿದುಕೊಂಡಿರುವ ಪ್ರಶ್ನೆಗಳು
ಈ ಮೂರು ಅಂಶಗಳ ಆಧಾರದಲ್ಲಿಯೇ ಇಂದು ಸುಪ್ರೀಂನಲ್ಲಿ ವಾದ ನಡೆಯಿತು. ಅತೃಪ್ತ ಶಾಸಕರ ಪರ ಮುಕುಲ್ ರೋಹ್ಟಗಿ, ಸ್ಪೀಕರ್ ಪರವಾಗಿ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ಆದರೆ ಒಂದಿಷ್ಟು ಪ್ರಶ್ನೆಗಳು ಹಾಗೆ ಉಳಿದುಕೊಂಡವು.

ರಾಜೀನಾಮೆ ಕೊಟ್ಟ ಶಾಸಕರಿಗೆ ರಾಜೀನಾಮೆ ಕೊಟ್ಟ ಮೇಲೆ ನೀಡಿರುವ ವಿಪ್ ಅನ್ವಯವಾಗುತ್ತದೆಯೇ?

ರಾಜೀನಾಮೆ ಮತ್ತು ಅನರ್ಹತೆಯನ್ನು ಒಂದೇ ವಿಚಾರಣೆ ಅಡಿ ತರಬಹುದೆ?

ಬೇರೆ ಪಕ್ಷದ ನಾಯಕರ ಜತೆ ಒಂದೇ ವಿಮಾನದಲ್ಲಿ ತೆರಳಿರುವುದು, ಪತ್ರಿಕಾ ಹೇಳಿಕೆಗಳನ್ನು ಪಕ್ಷ ವಿರೋಧಿ ಎಂದು ಪರಿಗಣಿಸಬಹುದೆ? ..

ಪರ-ವಿರೋಧದ ವಾದಗಳು ಜೋರಾಗಿಯೇ ನಡೆದಿದ್ದು ಒಂದು ದಿನ ಕಾಯಲೇಬೇಕಾಗಿದೆ.

  1. ಸುಪ್ರೀಂ ಕೋರ್ಟ್ ಆದೇಶಕ್ಕೆ ಅನಿವಾರ್ಯವಾಗಿ ಪಾಲಿಸಬೇಕಾಗುತ್ತದೆ. ನಿಗದಿತ ಅವಧಿಯೊಳಗೆ ರಾಜೀನಾಮೆ ಅಂಗಿಕಾರ ಮಾಡಿ ಎಂದು ಸ್ಪೀಕರ್ ಗೆ ನ್ಯಾಯಾಲಯ ತಿಳಿಸಿದರೆ ಮತ್ತೆ ಕಾನೂನಿನ ಆಯ್ಕೆಗಳನ್ನು ದೋಸ್ತಿಗಳು ಹುಡುಕಬಹುದು.
  2. ಶಾಸಕರ ರಾಜೀನಾಮೆ ಮತ್ತು ಅನರ್ಹತೆಯನ್ನು ಒಂದೇ ವೇದಿಕೆಯಡಿ ಅಥವಾ ಒಂದೇ ಕ್ರಮದ ಅಡಿ ವಿಚಾರಣೆ ಮಾಡಬಹುದು ಎಂದಾದರೆ ಅತೃಪ್ತ ಶಾಸಕರಿಗೆ ಹಿನ್ನಡೆಯಾಗಲಿದೆ.
  3. ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸಲು ಸೂಚಿಸಬಹುದು – ಕಾಲಮಿತಿಯೊಳಗೆ ರಾಜೀನಾಮೆ ಇತ್ಯರ್ಥಕ್ಕೆ ಆದೇಶಿಸಬಹುದು .
  4. ಸ್ಪೀಕರ್ ಅಧಿಕಾರ, ಕಾರ್ಯವ್ಯಾಪ್ತಿ ಪರಾಮರ್ಶೆ ಸಂಭವ – ಇಂಥ ಪ್ರಕರಣಗಳನ್ನುಎದುರಿಸಲು ಮಾರ್ಗಸೂಚಿ ರೂಪಿಸಲು ಸಾಂವಿಧಾನಿಕ ಪೀಠಕ್ಕೆ ಶಿಫಾರಸು ಸಾಧ್ಯತೆ -ಅಗತ್ಯ ಕಾನೂನು ತಿದ್ದುಪಡಿಗೆ ಪಾರ್ಲಿಮೆಂಟ್‌ ಗೂ ಸೂಚಿಸಬಹುದು.

ಪರಿಣಾಮ ಏನಾಗುತ್ತದೆ? ರಾಜೀನಾಮೆ ಸ್ವೀಕರಿಸಲು ಸೂಚಿಸಿದರೆ ಸರಕಾರ ಅಲ್ಪಮತಕ್ಕೆ ಕುಸಿಯುವುದು ಖಚಿತ

ಸಮಯಾವಕಾಶ ನೀಡಿದರೂ ರಾಜೀನಾಮೆ ಸ್ವೀಕಾರ ಅನಿವಾರ್ಯ. ಆಗಲೂ ಸರಕಾರಕ್ಕೆ ಉಳಿಗಾಲವಿಲ್ಲ.

Leave a Reply

Your email address will not be published. Required fields are marked *