ಸಿಎಂ ಪುತ್ರ ನಮ್ಮ ಸ್ವಾಮೀಜಿ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ..! : ಹೆಚ್.ಡಿ ರೇವಣ್ಣ

ಸಿಎಂ ಯಡಿಯೂರಪ್ಪ ಅವರು ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಹೇಳುತ್ತಾರೆ. ಜಂಬೋ ಸರ್ಕಸ್​ನಲ್ಲಿ ತಂತಿ ಮೇಲೆ ನಡೆಯುತ್ತಾರೆ. ಅದೇ ರೀತಿ ಸಿಎಂ ಕೂಡ ತಂತಿ ಮೇಲೆ ನಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ವ್ಯಂಗ್ಯವಾಡಿದರು.

ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದಲ್ಲಿ ನಮ್ಮಂತಹವರಾಗಿದ್ರೆ ಆ ಸ್ಥಾನದಿಂದ ರಾಜೀನಾಮೆ ಕೊಟ್ಟು ಕೆಳಗೆ ಇಳಿಯುತ್ತಿದ್ದೇವು ಎಂದು ಅವರು ಹೇಳಿದರು.

ಇನ್ನು ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ಕದ್ದಾಲಿಕೆ ವಿಚಾರ ಬಗ್ಗೆ ಮಾತನಾಡಿದ ಅವರು, ಸಿಎಂ ಸುಪುತ್ರ ನಮ್ಮ ಸ್ವಾಮೀಜಿ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಮ್ಮ ಸಮುದಾಯದ ಭಕ್ತರಿದ್ದಾರೆ ಅವರು ವಿಚಾರಿಸಿಕೊಳ್ಳುತ್ತಾರೆ ಎಂದು ಅವರು ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.

ವಿಜಯೇಂದ್ರ ಇಷ್ಟು ದಿನ ವನವಾಸದಲ್ಲಿದ್ದರು, ಈಗ ಟ್ರಜರಿ ಖಾಲಿಯಾಗಿದೆ ಅದಕ್ಕೆ ಸಿಎಂ ಪುತ್ರ ಟ್ರಜರಿ ಭರ್ತಿ ಮಾಡಿಕೊಳ್ಳಲಿ, ಹಿಂದೆ ಕೇಂದ್ರ ಸರ್ಕಾರ ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ ಜೆಡಿಎಸ್ ನಾಯಕರ ಫೋನ್​ ಕದ್ದಾಲಿಕೆ ಆಗಿದೆ. ಕುಮಾರಸ್ವಾಮಿ, ದೇವೇಗೌಡರ ಹಾಗೂ ನನ್ನ ಪೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕೇಂದ್ರ ಸರ್ಕಾರ ಜೆಡಿಎಸ್ ನಾಯಕರ ಫೋನ್ ಕದ್ದಾಲಿಕೆ ಮಾಡಿದೆ. ನೆರೆ ಪರಿಹಾರ ಮುಚ್ಚಿ ಹಾಕಲು ನಿರ್ಮಲಾನಂದ ಸ್ವಾಮೀಜಿ ಫೋನ್ ಕದ್ದಾಲಿಕೆಯ ಆರೋಪ ಮಾಡಿ ಚರ್ಚೆ ಮಾಡುತ್ತಿದ್ದಾರೆ. ವಿಪಕ್ಷಗಳನ್ನು ಹತ್ತಿಕ್ಕಲು ಸರ್ಕಾರದಿಂದ ಸಾಧ್ಯವಿಲ್ಲ ಎಂದು ಮಾಜಿ ಸಚಿವ ರೇವಣ್ಣ ಅವರು ಆರೋಪ ಮಾಡಿದರು.