ಶಾಕಿಂಗ್ ನ್ಯೂಸ್‌ : ” ಜೆಡಿಎಸ್ ಪಕ್ಷವನ್ನ ಕಾಂಗ್ರೆಸ್ ಪಕ್ಷಕ್ಕೆ ಮಾರಾಟ “

ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್‌ಸನ್ನು ಮಾರಾಟ ಮಾಡಿದ್ದಾರೆ ಎಂದು ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ವೆಂಕಟಶಿವಾರೆಡ್ಡಿ ವಿರುದ್ಧ ಮಂಜುನಾಥ್ ಗೌಡ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಜೊತೆ ಸೇರಿಕೊಂಡು ವೆಂಕಟಶಿವಾರೆಡ್ಡಿ ಜೆಡಿಎಸ್ ಮಾರಾಟ ಮಾಡಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಪುರಸಭೆ ಸ್ಥಾನಗಳ ಸೋಲಿಗೆ ವೆಂಕಟಶಿವಾರೆಡ್ಡಿ ಕಾರಣವೆಂದು ಆರೋಪಿಸಿದ್ದಾರೆ.

ಮಾಲೂರು ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಪಕ್ಷದ ಮಂಜುನಾಥ್ ಗೌಡ ಕೈಜೋಡಿಸಿದ್ದು, ವೆಂಕಟಶಿವಾರೆಡ್ಡಿ ಪಕ್ಷ ಬೆಳೆಸಲು ಯಾವುದೇ ಕೆಲಸ ಮಾಡ್ತಿಲ್ಲವೆಂದು ಮಂಜುನಾಥ್ ಗೌಡ ಆರೋಪ ಮಾಡಿದ್ದಾರೆ.

ಹಾಸನ ಗೆದ್ದ ಪ್ರಜ್ವಲ್ ರೇವಣ್ಣಗೆ ಹೊಸ ಪಟ್ಟ ! ಏನಿದು ಅಂತೀರಾ ?

ಹಾಸನದಲ್ಲಿ ಗೆಲವು ಸಾಧಿಸಿದ  ಪ್ರಜ್ವಲ್ ರೇವಣ್ಣಗೆ  ಜೆಡಿಎಸ್​ ಪಕ್ಷದಲ್ಲಿ ದೊಡ್ಡ ಹುದ್ದೆ ನೀಡಲು ಮಾಜಿ ಪ್ರಧಾನಿ ದೇವೇಗೌಡರು ಮುಂದಗಿದ್ದಾರೆ.

ನೂತನ ಸಂಸದ ಪ್ರಜ್ವಲ್ ಗೆ ಹೊಸ ಜವಾಬ್ದಾರಿ ನೀಡಲಿದ್ದು, ಪ್ರಜ್ವಲ್ ಹಿಂದಿನಿಂದಲೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಪಕ್ಷ ಸಂಘಟನೆ, ಜನರ ನಡುವೆ ಬೆರೆಯುವಿಕೆ, ಕಾರ್ಯಕರ್ತರ ಜೊತೆಗಿನ ಒಡನಾಟ ಗುರುತಿಸಿರುವ ದೇವೇಗೌಡರು ಈ ತೀರ್ಮಾನ ಕೈಗೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಎಚ್ ವಿಶ್ವನಾಥ್ ಇದ್ದಾರೆ, ಸದ್ಯ ಯುವ ಘಟಕದ ಅಧ್ಯಕ್ಷರಾಗಿ ಮಧು ಬಂಗಾರಪ್ಪ ಇದ್ದಾರೆ. ವಿಶ್ವನಾಥ್ ಕುರುಬ ಜಾತಿ ಪ್ರತಿನಿಧಿ, ಮಧು ಬಂಗಾರಪ್ಪ ಈಡಿಗ ಜಾತಿಗೆ ಸೇರಿದವರು. ಒಕ್ಕಲಿಗ ಜಾತಿಯಿಂದ ಆಯಕಟ್ಟಿನ ಸ್ಥಳದಲ್ಲಿ ಒಬ್ಬರಾದರೂ ಇರಲಿ ಎಂದು ಈ ಯೋಚನೆ ಮಾಡಿದ್ದಾರೆ.

ಪ್ರಜ್ವಲ್ ಜೆಡಿಎಸ್ ನ ಭವಿಷ್ಯದ ನಾಯಕ ಎಂದೇ ಬಿಂಬಿತನಾದ ಯುವ ನಾಯಕ. ಹಾಗಾಗಿ ಈಗಿನಿಂದಲೇ ಪ್ರಜ್ವಲ್ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮತ್ತು  ಯುವಕರನ್ನು ಸಂಘಟನೆ ಮಾಡಲು ಸೂಕ್ತ ಎಂಬ ಭಾವನೆಯೊಂದಿಗೆ ಕೆಲವೊಂದು ಜವಬ್ದಾರಿ ನೀಡಲು ಪ್ರಜ್ವಲ್ ಗೆ ಪಕ್ಷ ಮುಂದಾಗಿದೆ.

ಜೆಡಿಎಸ್ ಗೆ ರಾಜೀನಾಮೆ ಬೆದರಿಕೆ : ಎಚ್ ವಿಶ್ವನಾಥ್

ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಬಂಡಾಯ ಕಂಡು ಬರುತ್ತಿದೆ. ಇದುವರೆಗೆ ಕಾಂಗ್ರೆಸ್ ನಲ್ಲಿ ಅತೃಪ್ತ ನಾಯಕರ ಬಣ ಹುಟ್ಟಿಕೊಂಡಿದ್ದು, ಇದೀಗ ಜೆಡಿಎಸ್ ನಲ್ಲಿಯೂ ಕೂಡ ಬಂಡಾಯ ಶುರುವಾಗಿದೆ.

ಮೈಸೂರಿನಲ್ಲಿ ಮಾತನಾಡಿದ  ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ತಾವು ಶಿಫಾರಸ್ಸು ಮಾಡಿ ಒಬ್ಬರಿಗೂ ಕೂಡ ಟಿಕೆಟ್ ನೀಡಿಲ್ಲ. ನಮ್ಮ ದುರಹಂಕಾರದಿಂದಲೇ ನಮಗೆ ಸೋಲಾಗಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ವಿರುದ್ಧವೇ ಸಿಡಿದೆದ್ದ ಜೆಡಿಎಸ್ ರಾಜ್ಯಾಧ್ಯಕ್ಷ
ಎಚ್.ವಿಶ್ವನಾಥ್. ಕೆ.ಆರ್‌.ನಗರ ಪುರಸಭೆ ಸೋಲಿನ ಹಿನ್ನೆಲೆ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಕೆ.ಆರ್.ನಗರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಮ್ಮ ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೂಡ ನೀಡಿಲ್ಲ. ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದರು.

ಪಕ್ಷದ ರಾಜ್ಯಾದ್ಯಕ್ಷನಾಗಿ ನಾನು ಹೇಳಿದ ಒಬ್ಬರಿಗೂ ಚುನಾವಣೆಯಲ್ಲಿ ಟಿಕೆಟ್ ನೀಡದೆ ದುರಾಂಕರದಿಂದ ವರ್ತಿಸಿದ್ದಾರೆ. ಹಣ ಬಲವೇ ಮುಖ್ಯ ಎನ್ನುವ ಮನೋಭಾವವನ್ನು ಇನ್ನಾದರೂ ಬಿಡದಿದ್ದಲ್ಲಿ ಒಳಿತಾಗದು ಎಂದು ಪರೋಕ್ಷವಾಗಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಅಮಿತ್‌ ಶಾಗೇ ಗೃಹ ಖಾತೆ ಏಕೆ? ಹಿಂದಿನ ಅಸಲಿ ಕಹಾನಿ

ಕೇಂದ್ರ ಸಚಿವ ಸಂಪುಟದಲ್ಲಿ ಪ್ರಧಾನಿ ನಂತರದ ಸ್ಥಾನ ಗೃಹ ಖಾತೆ ಹೊಂದಿರುವ ಸಚಿವರದ್ದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಇಂಥ ಮಹತ್ವದ ಖಾತೆಯನ್ನು ಇದೀಗ ಪ್ರಧಾನಿ ಮೋದಿ ಅವರು ತಮ್ಮ ಅತ್ಯಾಪ್ತ ಅಮಿತ್‌ ಶಾಗೆ ನೀಡುವ ಮೂಲಕ, ಸರ್ಕಾರದಲ್ಲಿ ತಮ್ಮ ನಂತರದ ಸ್ಥಾನ ಯಾರದ್ದು ಎಂಬುದನ್ನು ಸೂಚ್ಯವಾಗಿ ಎಲ್ಲರಿಗೂ ರವಾನಿಸಿದ್ದಾರೆ.

ಹಿಂದಿನ ಸಂಪುಟದಲ್ಲಿ ಮೋದಿ ನಂತರದ ಸ್ಥಾನ ಯಾರದ್ದು ಎಂಬ ಬಗ್ಗೆ ಸಾಕಷ್ಟುಚರ್ಚೆಗಳೇ ನಡೆದಿದ್ದವು. ಕಾರಣ ರಾಜ್‌ನಾಥ್‌ಸಿಂಗ್‌ ಗೃಹ ಖಾತೆ ಹೊಂದಿದ್ದರೂ, ಸದಾ ಮೋದಿ ಅವರ ಒಂದು ಪಕ್ಕದಲ್ಲಿ ರಾಜ್‌ನಾಥ್‌ ಇರುತ್ತಿದ್ದರೆ ಮತ್ತೊಂದು ಪಕ್ಕದಲ್ಲಿ ಇರುತ್ತಿದ್ದುದ್ದು ಅವರ ಮತ್ತೊಬ್ಬ ಅತ್ಯಾಪ್ತ ಅರುಣ್‌ ಜೇಟ್ಲಿ. ಹೀಗಾಗಿಯೇ ಜೇಟ್ಲಿ ಹಣಕಾಸು, ರಕ್ಷಣಾ ಖಾತೆಗಳನ್ನು ಮೋದಿ ವಹಿಸಿದ್ದರು.

ಆದರೆ ಈ ಬಾರಿ ಅಂಥ ಯಾವುದೇ ಚರ್ಚೆಗೆ ಅವಕಾಶವೇ ಇಲ್ಲ. ಕಾರಣ ಅನಾರೋಗ್ಯದ ಕಾರಣ ನೀಡಿ ಜೇಟ್ಲಿ ಸಂಪುಟದಿಂದ ಹೊರಬಿದ್ದ ಕಾರಣ, ಸಹಜವಾಗಿಯೇ ಗೃಹ ಖಾತೆ ಹೊಂದಿದ ಅಮಿತ್‌ ಶಾ, ಸರ್ಕಾರದಲ್ಲಿ ನಂ.2 ಸ್ಥಾನವನ್ನು ಹೊಂದಿರಲಿದ್ದಾರೆ.

ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಮೆಗಾ ಪ್ಲಾನ್?

ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಪ್ರಯತ್ನಕ್ಕೆ ಕೈಹಾಕದಂತೆ ಪಕ್ಷದ ವರಿಷ್ಠರು ಸ್ಪಷ್ಟಸೂಚನೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ವದಂತಿಗಳ ನಡುವೆಯೇ ಯಡಿಯೂರಪ್ಪ ಅವರು ಈ ಹೇಳಿಕೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಶಾಸಕರನ್ನು ಕಳುಹಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ಹೀಗಾಗಿಯೇ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕೇಂದ್ರದ ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ನಂತರ ಯಡಿಯೂರಪ್ಪ ಅವರು ಈ ಹೇಳಿಕೆ ನೀಡಿರುವುದು ನಾನಾ ರೀತಿಯ ವಿಶ್ಲೇಷಣೆಗೆ ನಾಂದಿ ಹಾಡಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಈ ಪ್ರಮಾಣಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅಧಿಕಾರಕ್ಕಾಗಿ ನಾವು ಹಾತೊರೆಯುವುದಿಲ್ಲ. ಅದರ ಅಗತ್ಯವೂ ನಮಗಿಲ್ಲ. ಮಧ್ಯಂತರ ಚುನಾವಣೆಯ ಬಗ್ಗೆ ಊಹಿಸಿಯೂ ಮಾತನಾಡುವುದಿಲ್ಲ. ಈಗಿರುವ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವ ಶಕ್ತಿ ನಮಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಶಾಸಕರನ್ನು ಕಳುಹಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ನಡೆ ಏನು ಎಂಬುದು ಮೇಲ್ನೋಟಕ್ಕೆ ನಮಗೆ ಗೊತ್ತಾಗಿದೆ. ಈ ಕಾರಣಕ್ಕಾಗಿಯೇ ಸರ್ಕಾರ ಉರುಳಿಸುವ ಪ್ರಯತ್ನ ಕೈಹಾಕಬೇಡಿ ಎಂಬ ಸೂಚನೆಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ಮಾತನ್ನು ಚುನಾವಣೆಗೂ ಮೊದಲು ಪ್ರತಿನಿತ್ಯ ಹೇಳುತ್ತಿದ್ದ ಯಡಿಯೂರಪ್ಪ ಅವರ ಮಾತಿನ ಧಾಟಿ ಫಲಿತಾಂಶದ ನಂತರ ಕೊಂಚ ಬದಲಾಗಿತ್ತು. ಮಿತ್ರ ಪಕ್ಷಗಳು ಏನು ಮಾಡುತ್ತವೆ ಎಂಬುದನ್ನು ಕಾದು ನೋಡೋಣ ಎನ್ನುತ್ತಿದ್ದ ಅವರು ಇದೀಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮರುದಿನದಿಂದಲೇ ವರಸೆ ಬದಲಿಸಿರುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ನಾಯಕರಿಗೂ ಸೋಜಿಗವಾಗಿದೆ.

ಬಿಎಸ್‌ವೈ ಹೇಳಿಕೆಗೆ ಏನು ಕಾರಣ?
ಕಾದು ನೋಡುವ ತಂತ್ರದ ಭಾಗವಾಗಿರಬಹುದು. ಹೀಗೆ ಹೇಳುವುದರಿಂದ ಅಸಮಾಧಾನ ಹೋಗಲಾಡಿಸುವ ಉದ್ದೇಶದಿಂದ ಸಂಪುಟ ಪುನಾರಚನೆಯ ಕಸರತ್ತಿನಲ್ಲಿರುವ ಆಡಳಿತಾರೂಢ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಪ್ರಯತ್ನ ಕೈಬಿಟ್ಟು ನಿರಾಳರಾಗಬಹುದು. ಆಗ ಅತೃಪ್ತ ಶಾಸಕರು ಬೇಸರಗೊಂಡು ಹೊರಬರಬಹುದು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ತಾನೆ ಅಸ್ತಿತ್ವಕ್ಕೆ ಬಂದಿದೆ. ಜೂ.17ರಿಂದ 26ರವರೆಗೆ ಹೊಸ ಸರ್ಕಾರದ ಮೊದಲ ಸಂಸತ್‌ ಅಧಿವೇಶನ. ನಂತರ ಜುಲೈನಲ್ಲಿ ಕೇಂದ್ರದ ಬಜೆಟ್‌ ಮಂಡನೆಯಾಗಲಿದೆ. ಅಲ್ಲಿವರೆಗೆ ಗೊಂದಲ ಬೇಡ ಎಂಬ ನಿಲುವಿಗೆ ಬಂದಿರಬಹುದು.

ಸರ್ಕಾರ ಪತನಗೊಳ್ಳಲು ಅಗತ್ಯವಾದಷ್ಟುಸಂಖ್ಯೆಯ ಶಾಸಕರು ಆಡಳಿತಾರೂಢ ಪಕ್ಷಗಳಿಂದ ಹೊರಬರಲು ಹಿಂದೇಟು ಹಾಕುತ್ತಿರಬಹುದು. ನಾಲ್ಕೈದು ಶಾಸಕರಷ್ಟೇ ಹೊರಬಂದರೆ ಸರ್ಕಾರ ಅಭದ್ರವಾಗುವುದಿಲ್ಲ ಎಂಬುದು ಮನವರಿಕೆಯಾಗಿರಬಹುದು.

ಅನ್ಯಪಕ್ಷಗಳಿಂದ ಹೊರಬರುವ ಶಾಸಕರ ನೆರವಿನಿಂದ ಪರ್ಯಾಯ ಸರ್ಕಾರ ರಚಿಸುವುದರಿಂದ ಮತ್ತೆ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿಕ್ಕಿಲ್ಲ. ಅದರ ಬದಲು ಕಾದು ನೋಡಿ ಮಧ್ಯಂತರ ಚುನಾವಣೆ ಎದುರಿಸುವುದೇ ಸೂಕ್ತ ಎಂಬ ನಿಲುವಿಗೆ ಬಂದಿರಬಹುದು.

ಕೇಂದ್ರ ಸರ್ಕಾರದಿಂದ ರೈತರಿಗೆ, ವ್ಯಾಪಾರಸ್ಥರಿಗೆ ಭರ್ಜರಿ ಕೊಡುಗೆ!

ಪ್ರಧಾನಿ ಮೋದಿ 2.0 ಸರ್ಕಾರ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ಕಾರ್ಯೋನ್ಮುಖರಾಗಿರುವ ಪ್ರಧಾನಿ ಮೋದಿ, ತಮ್ಮ ಮೊದಲ ಸಂಪುಟ ಸಭೆಯಲ್ಲಿ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ.

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಈ ಹಿಂದೆ ಘೋಷಿಸಲಾಗಿದ್ದ ವಾರ್ಷಿಕ 6,000 ರೂ. ಸಹಾಯಧನವನ್ನು ಎಲ್ಲಾ ರೈತರಿಗೆ ವಿಸ್ತರಿಸಿ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.

ಇದರಿಂದ ದೇಶದ ಸುಮಾರು 15 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಒಟ್ಟು ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ ಸಹಾಯಧನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇನ್ನು ಕೇಂದ್ರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ವಾರ್ಷಿಕ 87,217.50 ಕೋಟಿ ರೂ. ಹೊರೆ ಬೀಳಲಿದ್ದು, ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ತನ್ನ ವಾಗ್ದಾನಕ್ಕೆ ಬದ್ಧ ಎಂಬ ಸಂದೇಶವನ್ನು ಮೋದಿ ಸರ್ಕಾರ ರವಾನಿಸಿದೆ.

ಇದೇ ವೇಳೆ ವ್ಯಾಪಾರಸ್ಥರಿಗೆ ಪಿಂಚಣಿ ಯೋಜನೆ ಘೋಷಿಸಿರುವ ಮೋದಿ ಸರ್ಕಾರ, ದೇಶದ ಸುಮಾರು 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಭರ್ಜರಿ ಕೊಡುಗೆ ನೀಡಿದೆ.